ಮನವು ಕುಸಿದು ದೇಹ ಮುದುಡಿ
ಜೀವಕೆ ಲವಲವಿಕೆಯೆ ಇಲ್ಲವು
ಮಾತು ಮರೆತು ಮೌನ ಮುಸುಕಿ
ಪ್ರೀತಿ ಸ್ನೇಹಗಳೆಲ್ಲೋ ಹೂತು ಹೋದವು.
ಅದೇ ರಗಳೆ ಅದೇ ದೊಂಬಿ ಗಲಭೆಯು
ಉಗ್ರರಿಂದ ಮುಗ್ಧ ಜನರ ಹತ್ಯೆಯು
ಏಕೋ ಭೀತಿ ಅದೇಕೆ ವಾದ ಹೇಳಿ ಕೇಳಿ
ಪ್ರತ್ಯೇಕತೆ ದುರಭಿಮಾನ ಪ್ರತಿಷ್ಠೆಯು.
ಅಯ್ಯೊ ಬಂತೆ ಇದೆಂಥ ಕೆಟ್ಟ ಕಾಲ
ಒಂದುಗೂಡಿ ಬದುಕಲೇಕೆ ಕಷ್ಟವು
ಏನೆಲ್ಲ ನೀತಿ ನಿಯಮ ಕಟ್ಟಳೆಗಳೂ
ಮುರಿದು ಬೀಳೆ ಭರಿಸಲಾಗದೀ ನಷ್ಟವು.
ಪಶು-ಪಕ್ಷಿಗಳಿಗೂ ಒಳಸಮೀಕ್ಷೆ ಶಕ್ತಿಯು-
"ಇದೇ ಏನು ಮನುಜಕುಲ;ಇದೇನಿವರ ಆಟವು
ದಿನಬೆಳಗಾದರೆ ಇವರಲ್ಲೇಕೆ ಗೊಣಗಾಟವು",
ಇದೋ ನೋಡಿ ಪೇಟೆ ಬೀದಿಲಿ
ಜನಸಂದಣೆ ವಾಹನಗಳ ಮಧ್ಯೆಯು
ಹಸುವೊಂದು ಸ್ವಸ್ಥವಾಗಿಯೆ ಮಲಗಿದೆ
ತನ್ನದೇ ಸ್ವಾತಂತ್ರ್ಯವನು ಬಯಸಿದೆ
"ಈ ಮನುಜನಿಗೇಕೆ ತಲೆ ಕೆಟ್ಟಿದೆ"
ಎಂದು ತಾನೆ ಮೆಲ್ಲಗೆ ಮೆಲುಕು ಹಾಕಿ ಮೈಚಲ್ಲಿದೆ.
ಇದೇನು ಹೃದಯ ಇದೇನೊ ಭಾವ
ಇದ್ದಕ್ಕಿದ್ದೊಲೆ ಅನುರಣಿಸುವ ಬಂಧವು
ಅದೇ ಸೂರ್ಯ ಅದೇ ಬೆಳಗು!
ಮತ್ತದೇ ಹೊಂಬಿಸಿಲಿಗೆ ನಾಂದಿಯು!!.
-ಎಚ್.ಶಿವರಾಂ
Subscribe to:
Post Comments (Atom)
No comments:
Post a Comment