ಸ್ವರಚಿತ ಕವನಗಳು

ಸ್ವರಚಿತ ಕವನಗಳು

Friday, June 15, 2007

ನಾಶ ಎಂದಿಗೂ ಇಲ್ಲ

ನಾಶ ಎಂದಿಗೂ ಇಲ್ಲ!

ಕಾಲ ನಿಲ್ಲಬೇಕು;ಕಾಲನ ಕರೆ ಬರಬೇಕು
ಎಲ್ಲರೂ “ಓ”ಗೊಡಬೇಕು
ಥರ ಥರ ನಡುಗಬೇಕು;ನಿರ್ಲಿಪ್ತರು ಮುಗಳ್ನಗಬೇಕು
ನಗರಗಳು ಒಡೆದು ಛಿದ್ರವಾಗಬೇಕು
ಕಾಡೆಲ್ಲ ನಾಡನ್ನು ದಿಃಕ್ಕರಿಸಿ ನಗಬೇಕು.

ತಿರುಗುವ ಭೂಮಿ ನಿಲ್ಲಬೇಕು
ಉರಿವ ಸೂರ್ಯ ಮತ್ತೂ ಉರಿಯಬೇಕು
ಅಂಟಾರ್ಕ್ಟಿಕಾದ ಮಂಜುಗಡ್ಡೆಗಳು ಸಿಡಿಯಬೇಕು
ವ್ಯೂಮ ಭೂಮಿಗಳು ಒಂದಾಗಬೇಕು
ಹರಿವ ನದಿಗಳು ಮನುಷ್ಯರಿಗಿಂತಲೂ
ಮಿಗಿಲಾಗಿ ಕೊತಕೊತ ಕುದಿಯಬೇಕು.

ಅರೆ-ಬರೆ ಉಳಿದ ಅಂತರಂಗದ ಧ್ವನಿಗಳೆಲ್ಲ
ಹೊಸ ಅರ್ಥ ಹುಡುಕಬೇಕು
ಜೀವ ಸಂಕುಲ ಸಾವಿನಲ್ಲೆ ಮರುಹುಟ್ಟು
ಕಾಣಲು ಹಾತೊರೆಯಬೇಕು.

ಇಲ್ಲ ಹಾಗಾಗುವುದಿಲ್ಲ ಸಂಪೂರ್ಣ ನಾಶ ಎಂದಿಗೂ ಇಲ್ಲ
“ನನಗೆ ಸಾವು ಬರುವುದಿಲ್ಲ”ಎಂಬ ಕೆಟ್ಟ ಧೈರ್ಯ
ಪ್ರಪಂಚ ಹೀಗೇ ಮುಂದುವರೆಯುತ್ತದೆ
ಏನೇನೋ ವೈಜ್ಞಾನಿಕ ಪ್ರಗತಿ ಕಾಣುತ್ತದೆ
ಮಾನವೀಯತೆ ಮಾತ್ರ ಸಾಯುತ್ತಲೆ ಬದುಕುತ್ತಿರುತ್ತದೆ.

ಸಮುದ್ರ ಹೀಗೇ ಮತ್ತೆ ಗಂಭೀರ ಮೊರೆಯುತ್ತಿರುತ್ತದೆ
ಕೆಲವೊಮ್ಮೆ ಮರಳಿ ಅಬ್ಬರಿಸುತ್ತದೆ;ಅಷ್ಟೇ.

*ಕರ್ಮವೀರ ದಲ್ಲಿ ಪ್ರಕಟಿತ