ಸ್ವರಚಿತ ಕವನಗಳು

ಸ್ವರಚಿತ ಕವನಗಳು

Wednesday, August 03, 2011

ಕಾರ್ಗಿಲ್ ಕಲಿಯೇ ನೀನು!

ನಿರುತ ಜಾಗೃತನಾಗು ನಿರುತ ಜಾಗೃತನಾಗು
ಗಡಿ ಕಾಯ್ವ ಧೀರ, ಏಳು ಎದ್ದೇಳು ಭಾರತದ ವೀರ!

ಅಗೋ ಹಿಮಗಿರಿಯ ಮಂಜಿನಾ ಮಬ್ಬಿನಲಿ
ಕೊಬ್ಬಿರುವ ಪಾತಕಿಯ ವೈಚಿತ್ರ್ಯ ನೋಡು
ಆ ಅರಿಯ ತಲೆ ತರಿದು ತಾಂಡವವ ನೀನಾಡು
ಪ್ರಳಯ ರುದ್ರನ ವರ ಪುತ್ರ ನೀನು.

ನಿನಗೆಂದೂ ಇದೆ ನೋಡು ಅರ್ಜುನಗೆ
ಅನುಜನಾದವನ ಸತತ ಪ್ರೀತಿ
ಆ ದೇವನ ಶಾಂತಿ ಸಂಧಾನ ರೀತಿ
ಏಳು ಎದ್ದೇಳು ರಣ ಕಹಳೆ ಊದು.

ನಿನೆಂದೂ ಸ್ಮರಿಸುತಿರು ಚಕ್ರ ಹಿಡಿಯದೇ
ಯೋಧನಿಗೆ ತಾನಾದ ಪ್ರೇರಣೆಯ ಶಕ್ತಿ
ಧರ್ಮ ಸಂಸ್ಥಾಪನೆಗೆ ಸಾರಥಿ ಅವನ ನೀತಿ
ಏಳು, ಎದ್ದೇಳು ಪರಮಾತ್ಮನಾ ಆಪ್ತ ನೀನು.

ನಿರುತ ಜಾಗೃತನಾಗು
ನಿರುತ ಜಾಗೃತನಾಗು
ಕಾರ್ಗಿಲ್ ಕಲಿಯೇ ನಿನು
ಜಗ್ಗದಿರು ಕುಗ್ಗದಿರು; ನಡೆ ಮುಂದೆ ನೀನು!.

(ಕಾರ್ಗಿಲ್ ಯುದ್ದ ನಡೆದ ಆ ದಿನಗಳಲ್ಲಿ ನಾನು ಬರೆದ ಕವನ
-15-08-1999.  ಉತ್ಥಾನ ಪತ್ರಿಕೆಯಲ್ಲಿ ಪ್ರಕಟಿತ)

ಕಾರ್ಗಿಲ್ ಯುದ್ಧ ನಡೆದು  ವರ್ಷಗಳು ಕಳೆದುಹೋದವು. ಪ್ರತಿವರ್ಷ ಜುಲೈ 26 ರಂದು ಕಾರ್ಗಿಲ್ ನಲ್ಲಿ ವಿಜಯ ಪತಾಕೆ ಹಾರಿಸಿದ ದಿನವನ್ನು ಆಚರಿಸುತ್ತೇವೆ. ವಿಕ್ರಮ್ ಬಾತ್ರಾ, ಅನೂಜ್ ನಯ್ಯರ್,
 ಸೌರಬ್ ಕಾಲಿಯಾ ರಂತಹ 527 ವೀರ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ದೇಶ ಕಾಯುತ್ತಿರುವ ಇಂತಹ  ಸೈನಿಕರಿಂದಾಗಿಯೇ ನಾವು ಬೆಚ್ಚನೆಯ ಬದುಕು ಸಾಗಿಸುತ್ತಿದ್ದೇವೆ. ನೆಮ್ಮದಿಯ ನಿದ್ರೆಗೆ ಜಾರುತ್ತಿದ್ದೇವೆ.  ಕಾರ್ಗಿಲ್ ದಿನವಾದ ಜುಲೈ 26-07-11 ರಂದು ಕನ್ನಡ ಪ್ರಭ ದಿನ ಪತ್ರಿಕೆ ಯಾರೂ ಮರೆಯಲಾಗದಂತ ಚಿರಸ್ಮರಣೀಯ ಲೇಖನವನ್ನು ಪ್ರಕಟಿಸಿ- ಕಾರ್ಗಿಲ್ ಯುದ್ದದಲ್ಲಿ ಮಡಿದ ಸೈನಿಕರಿಗೆ ನಮ್ಮ ಶ್ರದ್ಧಾಂಜಲಿ ಅರ್ಪಿಸಿದೆ. ಪತ್ರಿಕೆಯ ಬಳಗಕ್ಕೆ ಧನ್ಯವಾದಗಳು.

No comments: