ಸ್ವರಚಿತ ಕವನಗಳು

ಸ್ವರಚಿತ ಕವನಗಳು

Thursday, August 24, 2006

ಓ,ಪ್ರಭುವೇ...

ನಮ್ಮ ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಒಬ್ಬರು. ಅವರು ಅಜಾತ ಶತ್ರು. ಅವರು ಪ್ರಧಾನಿಯಾದ ಸಂದರ್ಭದಲ್ಲಿ ನಾನು ಬರೆದ ಕವನವಿದು:- 
 ಓ ಪ್ರಭುವೇ, ಇನ್ನು ಪರವಾಯಿಲ್ಲ, ಕೆಸರಿನಲ್ಲಿ ಕಮಲ ಹುಟ್ಟಿತು ಬಹುಜನ ಹೃದಯದ ಹೂವರಳಿತು ಹೊಸಗಾಳಿ ಬೀಸಲುಬಹುದು ಬದಲಾವಣೆ ಆಗಲೂಬಹುದು. 
 ಈಗಲೂ ಎಲ್ಲ ನೆನಪುಂಟು- ಎರಡೆರಡು ವರ್ಷಗಳ ಸರ್ಕಸ್ ಕಾಲೆಳೆದು ಕೆಳಗೆ ಬಿದ್ದರು ಸ್ಕೌಂಡ್ರಲ್ಸ್, ಗತಿಶೀಲತೆ ಕಾಣದೆಹೋದ ಪಥ ಭ್ರಾಂತರು ಹೌದು,ಮುಗಿಲ ಮೋಹದಿ ಕಳಚಬಾರದು ಭೂಮಿಗಿಳಿದ ಬೇರು. ಬೆಳಕು ಕಾಣದದೋ ಗೊಂ(ಗೊಂ)ಡಾರಣ್ಯ...

 ಸೂರ್ಯಕಾಂತಿ ಬಂದಿತು ಸತ್ಯ ಶಾಂತಿ ಅರಸಿತು ಭಾರತಾಂಬೆ ನಾಲ್ಕು ದಶಕಗಳ ತಪೋಧನನ ತಾನೆ ಮೆಚ್ಚಿ ಒಲಿದಳು... ಐವತ್ತರ ಸ್ವಾತಂತ್ರೋತ್ಸವ ಸಂಭ್ರಮದಲಿ ಧೀರಸುತನ ಏಕಾಕಿ ಆಲಿಂಗನ ಗೈದಳು. 

 ಸಾಧಕನೆತ್ತರಕೇರಿ ಕಂಡ ವ್ಯಕ್ತಿತ್ವ ವಿಸ್ತಾರ ಜನತೆಗೆ ತಾನೆ ತೋರಿ ನಲಿದಳು. ಕುಬ್ಜರಲ್ಲಿ ಕುಬ್ಜರು “ಸೇವೆ” ಹೆಸರಿನಲಿ ತಮ್ಮ ಸಾವೆ ಕಂಡರು. ಅಗೋ ಜತೆಗೆ ಹೆಜ್ಚೆ ಇಡುವೆವು ಸಂಗಡಿಗರ ಪ್ರತಿಜ್ಞೆ.. ಆಜನ್ಮ ಬ್ರಹ್ಮಚಾರಿ ಲೋಕವಿಹಾರಿ ಅಟಲ್ ಬಿಹಾರಿಯೊಂದಿಗೇ ವಚನಬದ್ಧತೆ- ಸತ್ವಪೂರ್ಣ ದೇಶಹಿತಕಾಗಿ, ಸರ್ವಜನತೆಯ ಸುಖಕಾಗಿ. 

 “ಓ ಪ್ರಭುವೇ, ಒಡಕು ಮೂಡದಿರಲಿ’’ ಮಹಾಜನತೆ ಜನಾರ್ದನನ ಸ್ಮರಿಸಿತು. ಇನ್ನು ಪರವಾಯಿಲ್ಲ, ಬರುವವು ಸಹಬಾಳ್ವೆಯ ಸಿಹಿದಿನಗಳು... ಸರ್ವಧರ್ಮ ಪ್ರಿಯ ಪ್ರಾಮಾಣಿಕ ಪಂಡಿತ ಪರಮ ನಿಷ್ಠುರವಾಗಿ ನೇತೃತ್ವದಿ ಹೊತ್ತ ನಂಬಿಕೆ ವಿಶ್ವಾಸಗಳು. 

 ಆ ದೇವನ ಇಚ್ಚೆಯಂತೆ ಎತ್ತರಕೇರಿದ ಜೀವ- 
”ಮೇರೇ ಪ್ರಭು! ಮುಝೇ ಇತನೀ ಊಂಛಾಯಿ ಕಭೀ ಮತ್ ದೇನಾ- ಉದರ್ ಘಾಸ್  ಭೀ ನಹೀ ಪೈದಾ ಹೋತಿ....ಎಂದು ಹಾಡಿದ ಕವಿಹೃದಯಿ... ವಾಗ್ಝರಿಯಲಿ ಎಲ್ಲರ ಸೆಳೆದಂಥ ವರ್ಚಸ್ವಿ ನೇತಾರ! 

ಇಂದು ಈತನ ತಲೆಮೇಲೆ ಕಾರಭಾರ... ಮುಂದಿನ ಅಸಂಖ್ಯ ಸವಾಲುಗಳಿಗೆ- ಮುಖಾಮುಖಿಯಾದ ಸರದಾರ ವಿಶ್ವಮುತ್ಸದ್ದಿ ತಾ ಬೆರಗೊಡೆವ ಧೀರ. ಕಾಲದ ಉತ್ತರ ನಿಲ್ಲುವುದಿಲ್ಲ, ಇಲ್ಲ ಇಲ್ಲ,ಒಬ್ಬ ಪೋಲಿಟಿಕಲ್ ಸೈನ್ಸ್ ವಿದ್ಯಾರ್ಥಿಗೂ ಇವರೇ ನಮ್ಮ ಪ್ರಧಾನಿ ಎಂದು ಮಾದರಿ ಪಾಠ ಹೇಳಲುಬಹುದಲ್ಲ, 

ಇನ್ನು ಪರವಾಯಿಲ್ಲ, ಕಡೆಗೂ ದಕ್ಷತೆಗೆ ದಕ್ಕಿತು ಅಧಿಕಾರ; ಕಾಲಜ್ಞಾನ ಹೇಳಿದೆಯಲ್ಲ... 
 ಮುಂದೊಂದು ದಿನ ಬರಲಿದೆ ಸುಭಿಕ್ಷತೆ ಕಾಯಬೇಕು ನಾವು;ಸದಾ ಮೋಸವೇ.. ಇಲ್ಲ ಇಲ್ಲ... 

  -ಎಚ್.ಶಿವರಾಂ “ಉತ್ಥಾನ” ಮಾಸ ಪತ್ರಿಕೆಯಲ್ಲಿ 1999 ರಲ್ಲಿ ಪ್ರಕಟಿತ ವಾಜಪೇಯಿ ಪರಿಚಯ

Wednesday, August 02, 2006

ಪ್ರೇಮ-ಪ್ರೀತಿ ಒಂದೇ ಅಲ್ಲ...

ಪ್ರೇಮ ಮತ್ತು ಪ್ರೀತಿ ಎರಡೂ ಒಂದೇ ಎಂದು ತಪ್ಪಾಗಿ ಭಾವಿಸಿರುವವರಿದ್ದಾರೆ. ಒಂದೇ ಮಾತಿನಲ್ಲಿ ಹೇಳ ಬೇಕೆಂದರೆ,ಹೆಂಡತಿ ಸತ್ತರೆ ಮರಳಿ ತರಬಹುದು. ಜನ್ಮಕೊಟ್ಟ ತಾಯಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆಕೆಯ ಮನಸ್ಸನ್ನು ನೋಯಿಸಿ ಜಗತ್ತನ್ನೇ ಜಯಿಸಿದರೇನು ಫಲ?... ಒಂಭತ್ತು ತಿಂಗಳು ಹೆತ್ತು ಹೊತ್ತು ಕೈತುತ್ತ ತಿನಿಸಿ ಸಾಕಿದ ಮಮತೆಯ ತಾಯಿ, ಕೈಹಿಡಿದು ನಡೆಸಿ, ವಿದ್ಯೆ ಕಲಿಸಿ, ಬದುಕಿಗೆ ಮಾರ್ಗದರ್ಶನ ಮಾಡಿದ ಪ್ರೇಮದ ತಂದೆ, ಕೆಲವರೇ ಆದರೂ ಪ್ರೀತಿಯ ತೋರುವ ಬಂಧುಗಳು, ಇವರೆಲ್ಲರನ್ನೂ ಬಿಟ್ಟು ದೂರ ಹೋಗಿ ಬದುಕಲಾದೀತೆ; ಅಂತಹ ಬದುಕಿನಲ್ಲಿ ನೆಮ್ಮದಿ ಸಿಕ್ಕೀತೇ... ಇಲ್ಲ, ತಾಯಿ-ತಂದೆಯ ಋಣ ಒಂದೇ ಜನ್ಮದಲ್ಲಿ ತೀರಿಸಲಶ್ಯಕ್ಯವೆನ್ನುತ್ತಾರೆ. ಅವರನ್ನೇ ಕಸಕ್ಕಿಂತ ಕಡೆಯಾಗಿಸಿ ಹೊರಟು ಹೋಗಲುಂಟೇ...? ಅಥವಾ ಅವರನ್ನು ಕೇವಲ ಕರುಣೆಯಿಂದ ನೋಡಿಕೊಳ್ಳುವುದಷ್ಟೇ ತನ್ನ ಕರ್ತವ್ಯವೆಂದು ಭಾವಿಸದೇ, ಅವರೊಂದಿಗೇ ಸಭ್ಯ ಗೃಹಸ್ಥನಾಗಿದ್ದು ತನ್ನ ಹೆಂಡತಿಯೊಡನೆ ಸಂಸಾರ ಸುಖ ಅನುಭವಿಸುತ್ತಲೆ, ಭಾವನಾತ್ಮಕ ಸಂಬಂಧವಿರಿಸಿಕೊಂಡಿರುವುದರಲ್ಲಿಯೆ ಈ ಜಗದ ಪ್ರೇಮ ಜೀವನದ ವೈಶಿಷ್ಟ್ಯವಿದಯೆಲ್ಲವೇ..? ಅದನ್ನು ಬಿಟ್ಟು ಹೆಂಡತಿಕೊಡುವ ದೈಹಿಕ ಸುಖಕ್ಕೆ, ಅವಳ ಮರುಳು ಮಾತಿಗೆ ವಶನಾಗಿ ತನ್ನ ತನ ಕಳೆದು ಕೊಳ್ಳುವುದೇನು?
ಪ್ರೀತಿಯ ಮುಂದೆ ಸದಾ ಗೆಲ್ಲುವುದು ಪ್ರೇಮವೇ. ಆದರೆ, ಪ್ರೀತಿಯನ್ನು (ಹೆಂಡತಿಯನ್ನು)ಅದರ ಸ್ಥಾನದಲ್ಲಿರಿಸಿಬೇಕು. ತಾಯಿಯ ಸ್ಥಾನ ದಿವ್ಯವಾದದ್ದು; ದೊಡ್ಡದು. ಅಷ್ಟಕ್ಕೂ ಪ್ರೇಮವಾಗಲಿ, ಪ್ರೀತಿಯಾಗಲಿ ಕುರುಡಾಗಬಾರದು ಮೌಢ್ಯವಾಗಬಾರದಲ್ಲ. ತಾಯಿ ಮಾತಿಗೇ ಬೆಲೆ ಕೊಡುತ್ತ ಪೂರ್ವಾಪರ ಆಲೋಚಿಸದೇ ಹೆಂಡತಿಯನ್ನೆ ಕಡೆಗಣಿಸುವುದು, ಹೆಂಡತಿಯೆ ತಿಳಿದವಳು ತಾಯಿ ಮುದಿ ಗೊಡ್ಡು ಹಳೆಯ ಕಾಲದವಳೆಂದು ಹಳಿಯುವುದೂ ಸರಿಯೇನು? ಪ್ರೇಮ-ಪುರುಷಾರ್ಥಗಳ ನಡುವೆ ದೊಡ್ಡ ರಣರಂಗವೇ ನಡೆದಿರುತ್ತದೆ;ಗಂಡಿನ ಹೃದಯದಲ್ಲಿ.. ಅಲ್ಲಿ ನಡೆಯುವುದು ದೇವ ದಾನವ ಯುದ್ದವೇ ಸರಿ. ಅದರಲ್ಲಿ ಮೊದಲು ಜಯಶೀಲನಾಗುವವನೇ ಜಗತ್ತನ್ನು ಜಯಿಸಬಲ್ಲವನಲ್ಲವೇ...ಯಾವಾಗಲೂ ದಾನವರ ದಿಗ್ವಿಜಯ ಮೇಲ್ನೋಟಕ್ಕೆ ಸರಿಯೆನಿಸೀತು. ಅವರೇ ಸುಖಿಗಳೆನಿಸೀತು. ದೇವತೆಗಳಿಗೆ ಮಾತ್ರ ಅಮೃತ ಪಾನ ಲಭಿಸುವುದು, ಅಮರತ್ವ ಸಿಗುವುದು. ಅವರಿಂದಲೇ ಜಗಕೆ ಬೆಳಕು ನೀಡುವ ನಿತ್ಯ ತತ್ವ ಜೀವನ ಸಿದ್ಧಾಂತಗಳು.
-ಎಚ್.ಶಿವರಾಂ, 29 ಜುಲೈ,2006