Wednesday, August 03, 2011

ಕಾರ್ಗಿಲ್ ಕಲಿಯೇ ನೀನು!

ನಿರುತ ಜಾಗೃತನಾಗು ನಿರುತ ಜಾಗೃತನಾಗು
ಗಡಿ ಕಾಯ್ವ ಧೀರ, ಏಳು ಎದ್ದೇಳು ಭಾರತದ ವೀರ!

ಅಗೋ ಹಿಮಗಿರಿಯ ಮಂಜಿನಾ ಮಬ್ಬಿನಲಿ
ಕೊಬ್ಬಿರುವ ಪಾತಕಿಯ ವೈಚಿತ್ರ್ಯ ನೋಡು
ಆ ಅರಿಯ ತಲೆ ತರಿದು ತಾಂಡವವ ನೀನಾಡು
ಪ್ರಳಯ ರುದ್ರನ ವರ ಪುತ್ರ ನೀನು.




ನಿನಗೆಂದೂ ಇದೆ ನೋಡು ಅರ್ಜುನಗೆ
ಅನುಜನಾದವನ ಸತತ ಪ್ರೀತಿ
ಆ ದೇವನ ಶಾಂತಿ ಸಂಧಾನ ರೀತಿ
ಏಳು ಎದ್ದೇಳು ರಣ ಕಹಳೆ ಊದು.

ನಿನೆಂದೂ ಸ್ಮರಿಸುತಿರು ಚಕ್ರ ಹಿಡಿಯದೇ
ಯೋಧನಿಗೆ ತಾನಾದ ಪ್ರೇರಣೆಯ ಶಕ್ತಿ
ಧರ್ಮ ಸಂಸ್ಥಾಪನೆಗೆ ಸಾರಥಿ ಅವನ ನೀತಿ
ಏಳು, ಎದ್ದೇಳು ಪರಮಾತ್ಮನಾ ಆಪ್ತ ನೀನು.

ನಿರುತ ಜಾಗೃತನಾಗು
ನಿರುತ ಜಾಗೃತನಾಗು
ಕಾರ್ಗಿಲ್ ಕಲಿಯೇ ನಿನು
ಜಗ್ಗದಿರು ಕುಗ್ಗದಿರು; ನಡೆ ಮುಂದೆ ನೀನು!.

(ಕಾರ್ಗಿಲ್ ಯುದ್ದ ನಡೆದ ಆ ದಿನಗಳಲ್ಲಿ ನಾನು ಬರೆದ ಕವನ
-15-08-1999.  ಉತ್ಥಾನ ಪತ್ರಿಕೆಯಲ್ಲಿ ಪ್ರಕಟಿತ)

ಕಾರ್ಗಿಲ್ ಯುದ್ಧ ನಡೆದು ಹನ್ನೆರಡು ವರ್ಷಗಳು ಕಳೆದುಹೋದವು. ಪ್ರತಿವರ್ಷ ಜುಲೈ 26 ರಂದು ಕಾರ್ಗಿಲ್ ನಲ್ಲಿ ವಿಜಯ ಪತಾಕೆ ಹಾರಿಸಿದ ದಿನವನ್ನು ಆಚರಿಸುತ್ತೇವೆ. ವಿಕ್ರಮ್ ಬಾತ್ರಾ, ಅನೂಜ್ ನಯ್ಯರ್,
 ಸೌರಬ್ ಕಾಲಿಯಾ ರಂತಹ 527 ವೀರ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ದೇಶ ಕಾಯುತ್ತಿರುವ ಇಂತಹ  ಸೈನಿಕರಿಂದಾಗಿಯೇ ನಾವು ಬೆಚ್ಚನೆಯ ಬದುಕು ಸಾಗಿಸುತ್ತಿದ್ದೇವೆ. ನೆಮ್ಮದಿಯ ನಿದ್ರೆಗೆ ಜಾರುತ್ತಿದ್ದೇವೆ.  ಕಾರ್ಗಿಲ್ ದಿನವಾದ ಜುಲೈ 26-07-11 ರಂದು ಕನ್ನಡ ಪ್ರಭ ದಿನ ಪತ್ರಿಕೆ ಯಾರೂ ಮರೆಯಲಾಗದಂತ ಚಿರಸ್ಮರಣೀಯ ಲೇಖನವನ್ನು ಪ್ರಕಟಿಸಿ- ಕಾರ್ಗಿಲ್ ಯುದ್ದದಲ್ಲಿ ಮಡಿದ ಸೈನಿಕರಿಗೆ ನಮ್ಮ ಶ್ರದ್ಧಾಂಜಲಿ ಅರ್ಪಿಸಿದೆ. ಪತ್ರಿಕೆಯ ಬಳಗಕ್ಕೆ ಧನ್ಯವಾದಗಳು.

Saturday, November 06, 2010

ದೀಪಾವಳಿ ಹಬ್ಬ


ದೀಪಾಲಂಕಾರ ಲೋಕಶೃಂಗಾರ
ಬೆಳಕು ಚೆಲ್ಲಿದ ಬಾಳ ವಿಹಾರ
ಸಂಭ್ರಮ ಸ್ಫುರಿಸುವ ಹ಼ರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.




ರಕ್ಕಸಲೀಲೆಯ ದಮನಗೊಳಿದ ಧಾತ್ರಿ
ಕತ್ತಲೆ ಕಳೆದು ಜ್ಞಾನ ಉದಿಸಿದ ಜ್ಯೋತಿ
ಹೊಸಬೆಳಕಲಿ ಹೊಸತಿರುವು ನೀಡಿದೆ ಕಾಂತಿ
ಬದುಕಿಗೆ ಸಂತಸ ಚಿಮ್ಮುವ ಹರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.

ಚಟಪಟ ಸಿಡಿಯುತ ಹೊಸ ಬಿರಿಸು ಬಾಣಗಳು
ಎಳೆಯರ ಕಿಲಕಿಲ ಕುಣಿಸುವ ಹಿರಿಯರ ತಣಿಸುವ
ಮನೆ ಮನೆ ಮನಗಳ ಹಗುರಗೊಳಿಸುವ ರಾತ್ರಿ
ಮತ್ತೆ ನಾಳೆಗೆ ನವಶಕ್ತಿ ತುಂಬುವ ಹರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.

ಹೃದಯ ಹೃದಯಗಳ ನಲಿಸಿ ಬೆಸೆಯುವ ಪ್ರೀತಿ
ಹೊಸ ಗೆಲುವಲಿ ಹೊಸ ದಾರಿ ತೋರುವ ದೀಪ್ತಿ
ನವೋದಯವೆ ತೊಲಗಿಸುವುದೆಲ್ಲರ ಭ್ರಾಂತಿ
ಜೀವಕೆ ಚೇತನ ತುಂಬುವ ಹ಼ರ್ಷಾವಳಿ
ಬರುತಿದೆ ಬರುತಿದೆ ದೀಪಾವಳಿ.
-ಎಚ್.ಶಿವರಾಂ ಬೆಂಗಳೂರು

Wednesday, March 31, 2010

ನಾ ಕವಿ ಎಂದು ಬರೆದ ಕವನವಿದಲ್ಲ....




ನಾ ಕವಿ ಎಂದು ಬರೆದಾ ಕವನವಿದಲ್ಲ
ಓ ನನ್ನ ಕಾವ್ಯಕನ್ನಿಕೆ ನೀನೇ ಒಲಿದಂಥ ಕವನ
ಈ ನನ್ನ ಸುಂದರ  ಕವನ.      ||ಪ||

ಯೌವನ ಕಾಂತಿ ಮಿಂಚಿದ ಕವನ
ಪ್ರೇಮ ವಸಂತ ಹರಸಿದ ಕವನ
ಪ್ರೀತಿ ಸಂಗೀತ ಹಾಡಿದ ಕವನ
ಈ ನನ್ನ ಶೃಂಗಾರ ಕವನ        ||೧||

ಹೃದಯ ಸ್ಪೂರ್ತಿ ಸೆಳೆದ ಕವನ
ವಾತ್ಸಲ್ಯ ವೀಣೆ ನುಡಿಸಿದ ಕವನ
ಮಮತೆಯ ಮಡಿಲಲಿ ಬೆಳೆದ ಕವನ
ಈ ನನ್ನ ಕರುಣಾರಸ ಕವನ   ||೨||

ಜಗದ ಚಿಂತನೆ ಕಲಕಿದ ಕವನ
ಜನಾರಣ್ಯದ ಭಯ ನೀಗಿದ ಕವನ
ಬದುಕಿನ ಪ್ರೀತಿಯೆ ಹೊಮ್ಮಿದ ಕವನ
ಈ ನನ್ನ ಧೀಮಂತ ಕವನ   ||೩||

ಜೀವನ ಚೇತನ ಚಿಮ್ಮಿದ ಕವನ
ನೂತನ ಭಾವ ನೀಡಿದ  ಕವನ
ಆತ್ಮನಿವೇದನೆ ಮಾಡಿದ ಕವನ
ಬ್ರಹ್ಮಾನಂದವೆ ಈ  ನನ್ನ ಕವನ ||೪||

Tuesday, July 24, 2007

ಕೆಲವು ಹನಿಗವನಗಳು

1.ಹಾಡುವುದನು
ಹಾಡುವುದನು
ಬಿಡಬೇಕೆಂದರೂ .
ಬಿಡಲಿಲ್ಲ ಹೃದಯ
ಹಾಡಿದರೆ ತಾನೆ
ನಲಿದೀತು ತೆರೆಸೀತು
ಜಗದ ಹೃದಯ.

2.ಮಾತು-ಮೌನ
ನನ್ನವಳ ಮಾತು
ಪಟಾಕಿ ಸಿಡಿದಂತೆ
ನನ್ನ ನಿತ್ಯ ಮೌನ
ನೀರು ಸುರಿದಂತೆ.

3.ನನ್ನವಳು
ಮುದ್ದು ಮಾಡುವಾಗ
ನನ್ನವಳು ಮದ್ದಾಗುತ್ತಾಳೆ
ಅವಳೊಂದಿಗೆ ವಾದಕ್ಕಿಳಿದಾಗ
ಅವಳೇ ಸಿಡಿ ಮದ್ದಾಗುತ್ತಾಳೆ ನನ್ನೆದೆಗೆ.

4.ಮೋಡಿ
ಚುಟುಕಾಗಿ ಹೇಳಿದರೆ
ಕೇಳುವವರೆ ಎಲ್ಲ –ಆದರೆ,
ಚುಟುಕು ಕಲೆಯ ಮೋಡಿ
ತಟ್ಟನೆ ಹೊಳೆಯುವುದಿಲ್ಲ
ಹೊಳೆದರಾಗಬೇಕು ನೋಡಿ
ಚುರುಕು ಮುಟ್ಟಿಸಿದಂತೇ body.

ಜೀವ-ಭಾವ

ಓ ನನ್ನ ಜೀವವೆ
ಏಕೆ ಸುಮ್ಮನೆ ಕೊರಗುವೆ
ಕಾಯುವುದು ನಿನ್ನ ಭಾವವೆ
ನಿನ್ನೊಳಗಿನ ಸತ್ವವೇ.

ಓ ನನ್ನ ಭಾವವೆ
ಏಕೆ ಬೇಧವ ಎಣಿಸುವೆ
ದಿಗ್ ದಿಗಂತದಾಚೆ ನಿನ್ನ ತಾಣವೆ
ಅಗೋಚರ ನಿನ್ನ ಲೋಕವೆ
ಚರಾಚರಗಳಲಿ ನಿನ್ನ ಪ್ರೇಮವೇ.

ಅನೂಹ್ಯ ಸೃಷ್ಟಿ ನೀನೆ ಅನಿತ್ಯ ದೃಷ್ಟಿ ಕಾಣುವೆ
ಆ ಭೋಗ ನೋವ ನಲಿವನೆಲ್ಲ ಇಲ್ಲೆ
ಅನುಭವಿಸುವೆ;ಬಿಡದೆ ಜಯಿಸುವೇ.

ನಿನಗೆ ನೀನ ದೈವವೆ
ಎದೆಯ ಗುಡಿಗೆ ದಿವ್ಯವೇ
ಎಲ್ಲ ಪೂಜೆ-ಭಕ್ತಿಗೆ-
ನೀನೆ ಧನ್ಯ ಜೀವಿಯೇ.

ಆದಿ ಅಂತ್ಯವಿಲ್ಲದೆ ಪೂರ್ಣವಾಗಿಹೆ
ನೀ ಅನಂತ ರೂಪವೇ
ನಿನ್ನೊಳಗೆ ನೀನು ಸತ್ಯವೇ;
ಅಪಕರ್ಮವಳಿವ ತತ್ವವೇ.

Tuesday, July 10, 2007

ಅದೇ ಸೂರ್ಯ; ಅದೇ ಬೆಳಗು!

ಮನವು ಕುಸಿದು ದೇಹ ಮುದುಡಿ
ಜೀವಕೆ ಲವಲವಿಕೆಯೆ ಇಲ್ಲವು
ಮಾತು ಮರೆತು ಮೌನ ಮುಸುಕಿ
ಪ್ರೀತಿ ಸ್ನೇಹಗಳೆಲ್ಲೋ ಹೂತು ಹೋದವು.

ಅದೇ ರಗಳೆ ಅದೇ ದೊಂಬಿ ಗಲಭೆಯು
ಉಗ್ರರಿಂದ ಮುಗ್ಧ ಜನರ ಹತ್ಯೆಯು
ಏಕೋ ಭೀತಿ ಅದೇಕೆ ವಾದ ಹೇಳಿ ಕೇಳಿ
ಪ್ರತ್ಯೇಕತೆ ದುರಭಿಮಾನ ಪ್ರತಿಷ್ಠೆಯು.

ಅಯ್ಯೊ ಬಂತೆ ಇದೆಂಥ ಕೆಟ್ಟ ಕಾಲ
ಒಂದುಗೂಡಿ ಬದುಕಲೇಕೆ ಕಷ್ಟವು
ಏನೆಲ್ಲ ನೀತಿ ನಿಯಮ ಕಟ್ಟಳೆಗಳೂ
ಮುರಿದು ಬೀಳೆ ಭರಿಸಲಾಗದೀ ನಷ್ಟವು.

ಪಶು-ಪಕ್ಷಿಗಳಿಗೂ ಒಳಸಮೀಕ್ಷೆ ಶಕ್ತಿಯು-
"ಇದೇ ಏನು ಮನುಜಕುಲ;ಇದೇನಿವರ ಆಟವು
ದಿನಬೆಳಗಾದರೆ ಇವರಲ್ಲೇಕೆ ಗೊಣಗಾಟವು",
ಇದೋ ನೋಡಿ ಪೇಟೆ ಬೀದಿಲಿ
ಜನಸಂದಣೆ ವಾಹನಗಳ ಮಧ್ಯೆಯು
ಹಸುವೊಂದು ಸ್ವಸ್ಥವಾಗಿಯೆ ಮಲಗಿದೆ
ತನ್ನದೇ ಸ್ವಾತಂತ್ರ್ಯವನು ಬಯಸಿದೆ
"ಈ ಮನುಜನಿಗೇಕೆ ತಲೆ ಕೆಟ್ಟಿದೆ"
ಎಂದು ತಾನೆ ಮೆಲ್ಲಗೆ ಮೆಲುಕು ಹಾಕಿ ಮೈಚಲ್ಲಿದೆ.

ಇದೇನು ಹೃದಯ ಇದೇನೊ ಭಾವ
ಇದ್ದಕ್ಕಿದ್ದೊಲೆ ಅನುರಣಿಸುವ ಬಂಧವು
ಅದೇ ಸೂರ್ಯ ಅದೇ ಬೆಳಗು!
ಮತ್ತದೇ ಹೊಂಬಿಸಿಲಿಗೆ ನಾಂದಿಯು!!.
-ಎಚ್.ಶಿವರಾಂ

Tuesday, July 03, 2007

ದೇವರು

ದಿನವೂ ಬೆಳಕಿನತ್ತ
ಮುಖ ಮಾಡಿ
ಏಳುವವರು ನಾವು
ಇರುಳು ಸ್ವಸ್ಥರಾಗಿ
ನಿದ್ರಿಸಲು ಇಚ್ಛಿಸುವವರುನಾವು.

ಎಷ್ಟೋ ಸಲ ಇನ್ನೊಬ್ಬರ ಕಷ್ಟಕ್ಕೆ
”ಅಷ್ಟೇ ಎನ್ನುವವರು
ಅಷ್ಟೇ ಬಾರಿ ನಮ್ಮದೇ ಕಷ್ಟಕ್ಕೆ
”ಅಬ್ಬಾ ಎಂದುಸುರುವವರು
ನಿಡುಸುಯ್ಯುವವರು ನಾವು.

ದಿನವೂ ಭವಿಷ್ಯದತ್ತ
ನಿಟ್ಟಿಸಿ ಸುಖದ ಚಿಂತೆ ಮಾಡುವವರು
ಕ್ಷಣವೂ ವರ್ತಮಾನದಲಿ
ಯಾವ ನೋವೂ ಇರಲೊಲ್ಲದವರು.

ದಿನವೂ ಏನೇ ಆಗಲಿ-ಬಿಡಲಿ
ಹೊರಗಿನ ಗೋಳಿಗೆ
”ಅನಿಷ್ಟ” ಎನ್ನುವವರು
ಮನೆಯೊಳಗಿನ ದುಃಖಕೆ
”ಅಯ್ಯೋ” ಎಂದೊರಲುವವರು.

ದಿನವೂ ಆಸೆಗಳ ಹೊತ್ತು
ಹೊಸ ಬದುಕನರಸುತ್ತಲೆ
ಉತ್ಸುಕರಾಗುವೆವು;
ಸೋತಾಗಲೂ ನಗ ಬಲ್ಲವರು!
ಅರಿತಾಗಲೆ ನಾವು ಮನುಜರು
ಬೆರೆತು ಒಂದಾದಾಗಲೇ
ನಾವು ಕಾಂಬೆವು ದೇವರು.
-ಎಚ್.ಶಿವರಾಂ

Friday, June 15, 2007

Nasha endigoo illa

ನಾಶ ಎಂದಿಗೂ ಇಲ್ಲ!

ಕಾಲ ನಿಲ್ಲಬೇಕು;ಕಾಲನ ಕರೆ ಬರಬೇಕು
ಎಲ್ಲರೂ “ಓ”ಗೊಡಬೇಕು
ಥರ ಥರ ನಡುಗಬೇಕು;ನಿರ್ಲಿಪ್ತರು ಮುಗಳ್ನಗಬೇಕು
ನಗರಗಳು ಒಡೆದು ಛಿದ್ರವಾಗಬೇಕು
ಕಾಡೆಲ್ಲ ನಾಡನ್ನು ದಿಃಕ್ಕರಿಸಿ ನಗಬೇಕು.

ತಿರುಗುವ ಭೂಮಿ ನಿಲ್ಲಬೇಕು
ಉರಿವ ಸೂರ್ಯ ಮತ್ತೂ ಉರಿಯಬೇಕು
ಅಂಟಾರ್ಕ್ಟಿಕಾದ ಮಂಜುಗಡ್ಡೆಗಳು ಸಿಡಿಯಬೇಕು
ವ್ಯೂಮ ಭೂಮಿಗಳು ಒಂದಾಗಬೇಕು
ಹರಿವ ನದಿಗಳು ಮನುಷ್ಯರಿಗಿಂತಲೂ
ಮಿಗಿಲಾಗಿ ಕೊತಕೊತ ಕುದಿಯಬೇಕು.

ಅರೆ-ಬರೆ ಉಳಿದ ಅಂತರಂಗದ ಧ್ವನಿಗಳೆಲ್ಲ
ಹೊಸ ಅರ್ಥ ಹುಡುಕಬೇಕು
ಜೀವ ಸಂಕುಲ ಸಾವಿನಲ್ಲೆ ಮರುಹುಟ್ಟು
ಕಾಣಲು ಹಾತೊರೆಯಬೇಕು.

ಇಲ್ಲ ಹಾಗಾಗುವುದಿಲ್ಲ ಸಂಪೂರ್ಣ ನಾಶ ಎಂದಿಗೂ ಇಲ್ಲ
“ನನಗೆ ಸಾವು ಬರುವುದಿಲ್ಲ”ಎಂಬ ಕೆಟ್ಟ ಧೈರ್ಯ
ಪ್ರಪಂಚ ಹೀಗೇ ಮುಂದುವರೆಯುತ್ತದೆ
ಏನೇನೋ ವೈಜ್ಞಾನಿಕ ಪ್ರಗತಿ ಕಾಣುತ್ತದೆ
ಮಾನವೀಯತೆ ಮಾತ್ರ ಸಾಯುತ್ತಲೆ ಬದುಕುತ್ತಿರುತ್ತದೆ.

ಸಮುದ್ರ ಹೀಗೇ ಮತ್ತೆ ಗಂಭೀರ ಮೊರೆಯುತ್ತಿರುತ್ತದೆ
ಕೆಲವೊಮ್ಮೆ ಮರಳಿ ಅಬ್ಬರಿಸುತ್ತದೆ;ಅಷ್ಟೇ.

*ಕರ್ಮವೀರ ದಲ್ಲಿ ಪ್ರಕಟಿತ

Kambevu Devaru

ಕಾಂಬೆವು ದೇವರು

ದಿನವೂ ಬೆಳಕಿನತ್ತ
ಮುಖ ಮಾಡಿ
ಏಳುವವರು ನಾವು
ಇರುಳು ಸ್ವಸ್ಥರಾಗಿ
ನಿದ್ರಿಸಲು ಇಚ್ಛಿಸುವವರು ನಾವು.

ಎಷ್ಟೋ ಸಲ ಇನ್ನೊಬ್ಬರ ಕಷ್ಟಕ್ಕೆ
”ಅಷ್ಟೇ ಎನ್ನುವವರು
ಅಷ್ಟೇ ಬಾರಿ ನಮ್ಮದೇ ಕಷ್ಟಕ್ಕೆ
”ಅಬ್ಬಾ ಎಂದುಸುರುವವರು
ನಿಡುಸುಯ್ಯುವವರು ನಾವು.

ದಿನವೂ ಭವಿಷ್ಯದತ್ತ ನಿಟ್ಟಿಸಿ
ಸುಖದ ಚಿಂತೆ ಮಾಡುವವರು
ಕ್ಷಣವೂ ವರ್ತಮಾನದಲಿ
ಯಾವ ನೋವೂ ಇರಲೊಲ್ಲದವರು.

ದಿನವೂ ಏನೇ ಆಗಲಿ-ಬಿಡಲಿ
ಹೊರಗಿನ ಗೋಳಿಗೆ
”ಅನಿಷ್ಟ”ಎನ್ನುವವರು
ಮನೆಯೊಳಗಿನ ದುಃಖಕೆ
”ಅಯ್ಯೋ”ಎಂದೊರಲುವವರು.

ದಿನವೂ ಆಸೆಗಳ ಹೊತ್ತು
ಹೊಸ ಬದುಕನರಸುತ್ತಲೆ
ಉತ್ಸುಕರಾಗುವೆವು;
ಸೋತಾಗಲೂ ನಗ ಬಲ್ಲವರು!
ಅರಿತಾಗಲೆ ನಾವು ಮನುಜರು
ಬೆರೆತು ಒಂದಾದಾಗಲೇ
ನಾವು ಕಾಂಬೆವು ದೇವರು.
"ಮಂಗಳ" ಪತ್ರಿಕೆ

Sunday, September 10, 2006

ಒಲವಿಲ್ಲದ ಸತ್ಯವು

ನಾನು ಜೀವಿ ನೀನು ಭುವಿ
ನಮ್ಮ ಮೇಲೇ ಆಕಾಶವು
ಗಾಳಿ ಬೆಳಕು ಹಕ್ಕಿಗಳ ಚಿಲಿಪಿಲಿ
ಎತ್ತೆತ್ತಲೂ ವಿಪುಲ ಅವಕಾಶವು.

ನಾನು ಮನುಜ ನೀನು ಕಣಜ
ಉಳ್ಳವರದೇ ಇಲ್ಲಿ ಆಧಿಪತ್ಯವು
ಮಳೆಬೆಳೆ ದವಸ ಧಾನ್ಯ ನಮ್ಮದೆ ನಿಜ
ಕಲಿತರೆಲ್ಲ ಬದುಕಿನ ಪಾರುಪತ್ಯವು.

ನಾನು ಕವಿ ನೀನು ಛವಿ
ನಮಗೆ ಎದುರೇನು ಈ ಲೋಕವು
ಸಾವು ನೋವು ಬಹಳ ಕಹಿ
ಎಂದಿಗೂ ತಿಳಿವಿನ ಹರವಿದ್ದರೆ ಚೆನ್ನವು.

ನಾನು ಜ್ಞಾನಿ ನೀನು ದಿವ್ಯ ಮೌನಿ
ಏಕೆ ನಮ್ಮೊಳಗೇ ಆಂತರ್ಯುದ್ಧವು
ಭಾವದಲೆ ಬೆರಗು ಬೆಲೆ ಆತ್ಮ ಗ್ಲಾನಿ
ಎಲ್ಲ ಇಲ್ಲೇ ಒಲವಿಲ್ಲದ ಸತ್ಯವು.

ನನ್ನ “ಮಾರ್ದನಿ” ಕವನ ಸಂಕಲನದಿಂದ

Thursday, August 24, 2006

ಓ,ಪ್ರಭುವೇ...

ನಮ್ಮ ದೇಶ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಒಬ್ಬರು. ಅವರು ಅಜಾತ ಶತ್ರು. ಅವರು ಪ್ರಧಾನಿಯಾದ ಸಂದರ್ಭದಲ್ಲಿ ನಾನು ಬರೆದ ಕವನವಿದು:-

ಓ ಪ್ರಭುವೇ,
ಇನ್ನು ಪರವಾಯಿಲ್ಲ,
ಕೆಸರಿನಲ್ಲಿ ಕಮಲ ಹುಟ್ಟಿತು
ಬಹುಜನ ಹೃದಯದ ಹೂವರಳಿತು

ಹೊಸಗಾಳಿ ಬೀಸಲುಬಹುದು
ಬದಲಾವಣೆ ಆಗಲೂಬಹುದು.

ಈಗಲೂ ಎಲ್ಲ ನೆನಪುಂಟು-
ಎರಡೆರಡು ವರ್ಷಗಳ ಸರ್ಕಸ್
ಕಾಲೆಳೆದು ಕೆಳಗೆ ಬಿದ್ದರು ಸ್ಕೌಂಡ್ರಲ್ಸ್,
ಗತಿಶೀಲತೆ ಕಾಣದೆಹೋದ ಪಥ ಭ್ರಾಂತರು
ಹೌದು,ಮುಗಿಲ ಮೋಹದಿ
ಕಳಚಬಾರದು ಭೂಮಿಗಿಳಿದ ಬೇರು.

ಬೆಳಕು ಕಾಣದದೋ ಗೊಂ(ಗೊಂ)ಡಾರಣ್ಯ...
ಸೂರ್ಯಕಾಂತಿ ಬಂದಿತು
ಸತ್ಯ ಶಾಂತಿ ಅರಸಿತು
ಭಾರತಾಂಬೆ ನಾಲ್ಕು ದಶಕಗಳ ತಪೋಧನನ
ತಾನೆ ಮೆಚ್ಚಿ ಒಲಿದಳು...
ಐವತ್ತರ ಸ್ವಾತಂತ್ರೋತ್ಸವ ಸಂಭ್ರಮದಲಿ
ಧೀರಸುತನ ಏಕಾಕಿ ಆಲಿಂಗನ ಗೈದಳು.
ಸಾಧಕನೆತ್ತರಕೇರಿ ಕಂಡ ವ್ಯಕ್ತಿತ್ವ ವಿಸ್ತಾರ
ಜನತೆಗೆ ತಾನೆ ತೋರಿ ನಲಿದಳು.

ಕುಬ್ಜರಲ್ಲಿ ಕುಬ್ಜರು “ಸೇವೆ” ಹೆಸರಿನಲಿ
ತಮ್ಮ ಸಾವೆ ಕಂಡರು.
ಅಗೋ ಜತೆಗೆ ಹೆಜ್ಚೆ ಇಡುವೆವು ಸಂಗಡಿಗರ ಪ್ರತಿಜ್ಞೆ..
ಆಜನ್ಮ ಬ್ರಹ್ಮಚಾರಿ ಲೋಕವಿಹಾರಿ
ಅಟಲ್ ಬಿಹಾರಿಯೊಂದಿಗೇ ವಚನಬದ್ಧತೆ-
ಸತ್ವಪೂರ್ಣ ದೇಶಹಿತಕಾಗಿ,
ಸರ್ವಜನತೆಯ ಸುಖಕಾಗಿ.

“ಓ ಪ್ರಭುವೇ, ಒಡಕು ಮೂಡದಿರಲಿ’’
ಮಹಾಜನತೆ ಜನಾರ್ದನನ ಸ್ಮರಿಸಿತು.
ಇನ್ನು ಪರವಾಯಿಲ್ಲ, ಬರುವವು
ಸಹಬಾಳ್ವೆಯ ಸಿಹಿದಿನಗಳು...
ಸರ್ವಧರ್ಮ ಪ್ರಿಯ ಪ್ರಾಮಾಣಿಕ ಪಂಡಿತ
ಪರಮ ನಿಷ್ಠುರವಾಗಿ ನೇತೃತ್ವದಿ
ಹೊತ್ತ ನಂಬಿಕೆ ವಿಶ್ವಾಸಗಳು.

ಆ ದೇವನ ಇಚ್ಚೆಯಂತೆ ಎತ್ತರಕೇರಿದ ಜೀವ-
”ಮೇರೇ ಪ್ರಭು,ಮುಝೇ ಇತನೀ ಊಂಚಾಯಿ ಕಭೀ ಮತ್ ದೇನಾ-
ಎಂದು ಹಾಡಿದ ಕವಿಹೃದಯಿ...
ವಾಗ್ಝರಿಯಲಿ ಎಲ್ಲರ ಸೆಳೆದಂಥ ವರ್ಚಸ್ವಿ ನೇತಾರ!
ಇಂದು ಈತನ ತಲೆಮೇಲೆ ಕಾರಭಾರ...
ಮುಂದಿನ ಅಸಂಖ್ಯ ಸವಾಲುಗಳಿಗೆ-
ಮುಖಾಮುಖಿಯಾದ ಸರದಾರ
ವಿಶ್ವಮುತ್ಸದ್ದಿ ತಾ ಬೆರಗೊಡೆವ ಧೀರ.

ಕಾಲದ ಉತ್ತರ ನಿಲ್ಲುವುದಿಲ್ಲ,
ಇಲ್ಲ ಇಲ್ಲ,ಒಬ್ಬ ಪೋಲಿಟಿಕಲ್ ಸೈನ್ಸ್
ವಿದ್ಯಾರ್ಥಿಗೂ ಇವರೇ ನಮ್ಮ ಪ್ರಧಾನಿ
ಎಂದು ಮಾದರಿ ಪಾಠ ಹೇಳಲುಬಹುದಲ್ಲ,
ಇನ್ನು ಪರವಾಯಿಲ್ಲ, ಕಡೆಗೂ ದಕ್ಷತೆಗೆ
ದಕ್ಕಿತು ಅಧಿಕಾರ; ಕಾಲಜ್ಞಾನ ಹೇಳಿದೆಯಲ್ಲ...
ಮುಂದೊಂದು ದಿನ ಬರಲಿದೆ ಸುಭಿಕ್ಷತೆ
ಕಾಯಬೇಕು ನಾವು;ಸದಾ ಮೋಸವೇ.. ಇಲ್ಲ ಇಲ್ಲ...

-ಎಚ್.ಶಿವರಾಂ “ಉತ್ಥಾನ” ಮಾಸ ಪತ್ರಿಕೆಯಲ್ಲಿ 1999 ರಲ್ಲಿ ಪ್ರಕಟಿತ

ವಾಜಪೇಯಿ ಪರಿಚಯ

Wednesday, August 02, 2006

ಪ್ರೇಮ-ಪ್ರೀತಿ ಒಂದೇ ಅಲ್ಲ...

ಪ್ರೇಮ ಮತ್ತು ಪ್ರೀತಿ ಎರಡೂ ಒಂದೇ ಎಂದು ತಪ್ಪಾಗಿ ಭಾವಿಸಿರುವವರಿದ್ದಾರೆ. ಒಂದೇ ಮಾತಿನಲ್ಲಿ ಹೇಳ ಬೇಕೆಂದರೆ,ಹೆಂಡತಿ ಸತ್ತರೆ ಮರಳಿ ತರಬಹುದು. ಜನ್ಮಕೊಟ್ಟ ತಾಯಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆಕೆಯ ಮನಸ್ಸನ್ನು ನೋಯಿಸಿ ಜಗತ್ತನ್ನೇ ಜಯಿಸಿದರೇನು ಫಲ?... ಒಂಭತ್ತು ತಿಂಗಳು ಹೆತ್ತು ಹೊತ್ತು ಕೈತುತ್ತ ತಿನಿಸಿ ಸಾಕಿದ ಮಮತೆಯ ತಾಯಿ, ಕೈಹಿಡಿದು ನಡೆಸಿ, ವಿದ್ಯೆ ಕಲಿಸಿ, ಬದುಕಿಗೆ ಮಾರ್ಗದರ್ಶನ ಮಾಡಿದ ಪ್ರೇಮದ ತಂದೆ, ಕೆಲವರೇ ಆದರೂ ಪ್ರೀತಿಯ ತೋರುವ ಬಂಧುಗಳು, ಇವರೆಲ್ಲರನ್ನೂ ಬಿಟ್ಟು ದೂರ ಹೋಗಿ ಬದುಕಲಾದೀತೆ; ಅಂತಹ ಬದುಕಿನಲ್ಲಿ ನೆಮ್ಮದಿ ಸಿಕ್ಕೀತೇ... ಇಲ್ಲ, ತಾಯಿ-ತಂದೆಯ ಋಣ ಒಂದೇ ಜನ್ಮದಲ್ಲಿ ತೀರಿಸಲಶ್ಯಕ್ಯವೆನ್ನುತ್ತಾರೆ. ಅವರನ್ನೇ ಕಸಕ್ಕಿಂತ ಕಡೆಯಾಗಿಸಿ ಹೊರಟು ಹೋಗಲುಂಟೇ...? ಅಥವಾ ಅವರನ್ನು ಕೇವಲ ಕರುಣೆಯಿಂದ ನೋಡಿಕೊಳ್ಳುವುದಷ್ಟೇ ತನ್ನ ಕರ್ತವ್ಯವೆಂದು ಭಾವಿಸದೇ, ಅವರೊಂದಿಗೇ ಸಭ್ಯ ಗೃಹಸ್ಥನಾಗಿದ್ದು ತನ್ನ ಹೆಂಡತಿಯೊಡನೆ ಸಂಸಾರ ಸುಖ ಅನುಭವಿಸುತ್ತಲೆ, ಭಾವನಾತ್ಮಕ ಸಂಬಂಧವಿರಿಸಿಕೊಂಡಿರುವುದರಲ್ಲಿಯೆ ಈ ಜಗದ ಪ್ರೇಮ ಜೀವನದ ವೈಶಿಷ್ಟ್ಯವಿದಯೆಲ್ಲವೇ..? ಅದನ್ನು ಬಿಟ್ಟು ಹೆಂಡತಿಕೊಡುವ ದೈಹಿಕ ಸುಖಕ್ಕೆ, ಅವಳ ಮರುಳು ಮಾತಿಗೆ ವಶನಾಗಿ ತನ್ನ ತನ ಕಳೆದು ಕೊಳ್ಳುವುದೇನು?
ಪ್ರೀತಿಯ ಮುಂದೆ ಸದಾ ಗೆಲ್ಲುವುದು ಪ್ರೇಮವೇ. ಆದರೆ, ಪ್ರೀತಿಯನ್ನು (ಹೆಂಡತಿಯನ್ನು)ಅದರ ಸ್ಥಾನದಲ್ಲಿರಿಸಿಬೇಕು. ತಾಯಿಯ ಸ್ಥಾನ ದಿವ್ಯವಾದದ್ದು; ದೊಡ್ಡದು. ಅಷ್ಟಕ್ಕೂ ಪ್ರೇಮವಾಗಲಿ, ಪ್ರೀತಿಯಾಗಲಿ ಕುರುಡಾಗಬಾರದು ಮೌಢ್ಯವಾಗಬಾರದಲ್ಲ. ತಾಯಿ ಮಾತಿಗೇ ಬೆಲೆ ಕೊಡುತ್ತ ಪೂರ್ವಾಪರ ಆಲೋಚಿಸದೇ ಹೆಂಡತಿಯನ್ನೆ ಕಡೆಗಣಿಸುವುದು, ಹೆಂಡತಿಯೆ ತಿಳಿದವಳು ತಾಯಿ ಮುದಿ ಗೊಡ್ಡು ಹಳೆಯ ಕಾಲದವಳೆಂದು ಹಳಿಯುವುದೂ ಸರಿಯೇನು? ಪ್ರೇಮ-ಪುರುಷಾರ್ಥಗಳ ನಡುವೆ ದೊಡ್ಡ ರಣರಂಗವೇ ನಡೆದಿರುತ್ತದೆ;ಗಂಡಿನ ಹೃದಯದಲ್ಲಿ.. ಅಲ್ಲಿ ನಡೆಯುವುದು ದೇವ ದಾನವ ಯುದ್ದವೇ ಸರಿ. ಅದರಲ್ಲಿ ಮೊದಲು ಜಯಶೀಲನಾಗುವವನೇ ಜಗತ್ತನ್ನು ಜಯಿಸಬಲ್ಲವನಲ್ಲವೇ...ಯಾವಾಗಲೂ ದಾನವರ ದಿಗ್ವಿಜಯ ಮೇಲ್ನೋಟಕ್ಕೆ ಸರಿಯೆನಿಸೀತು. ಅವರೇ ಸುಖಿಗಳೆನಿಸೀತು. ದೇವತೆಗಳಿಗೆ ಮಾತ್ರ ಅಮೃತ ಪಾನ ಲಭಿಸುವುದು, ಅಮರತ್ವ ಸಿಗುವುದು. ಅವರಿಂದಲೇ ಜಗಕೆ ಬೆಳಕು ನೀಡುವ ನಿತ್ಯ ತತ್ವ ಜೀವನ ಸಿದ್ಧಾಂತಗಳು.
-ಎಚ್.ಶಿವರಾಂ, 29 ಜುಲೈ,2006

Monday, June 19, 2006

Neenillade Naanilla


-from my published Poem collection-"Mardani"

Sunday, June 18, 2006

Abhignaana


-Mechhuge award-"Tushara"

Anaavarana


- published in the Magazine-"Samyukhta karnataka"

Saturday, June 17, 2006

Navu Naguvahagee..


This is the poem published in the Magazine-"Aparanji"  ನನ್ನ ಧ್ವನಿವಾಹಿನಿ

Neenu-Naanu


One of my favourite Kannada Poem Published in the Magazine "Mayura"