ಸ್ವರಚಿತ ಕವನಗಳು

ಸ್ವರಚಿತ ಕವನಗಳು

Wednesday, July 30, 2014

ಅಭಿಶಾಪ

ಭವಿಯ ರಮ್ಯತೆಗೆ ಭಾವಾರ್ಥಗಳ ತುಂಬಿ                               
 ಹಾಡಿಹೊಗಳಿದರು ಕವಿಗಳು;
ನೀರಸ ಜೀವನದಿ ಒಣನಗೆ ಅವಮಾನಗಳಲಿ
ಹಳಿದು ಕಣ್ಣೀರಿಳಿದರೂ  ಸುಮ್ಮನೆ ನಿರ್ಲಿಪ್ತರಾಗಿ
ಬದುಕಬೇಕೆಂದು ಸಾರಿದರು ದಾರ್ಶನಿಕರು.

ನಮ್ಮ ನಮ್ಮ ನಡುವೆ ಮುಖಾಮುಖಿಯಾದರೂ
ಅರಿಯಲಾರದೇ ಸ್ಪಂದಿಸದೇ ಹೋದವರೂ ನಮ್ಮವರೇ...
ಮನಸ್ಸಿಗೆ ಶಬ್ದಜಾಲಗಳ ಹೊಂದಿಸಿ
ದೇಹ ಧ್ವನಿಪೆಟ್ಟಿಗೆಯಲಿ ಮಾತು ಪೋಣಿಸಿದವರು
ಆತ್ಮಸಾಕ್ಷಿಯಂತೆ ನಡೆದು ನುಡಿವವರು
ತೀರಾ ವಿರಳವಾದರೂ ಇರುವರಲ್ಲ...
.
ಏನೆಲ್ಲ ತಾಂತ್ರಿಕತೆಯಲಿ ಪರಸ್ಪರ
ಸಂಪರ್ಕ ಕಲ್ಪಿಸಿ ವಿಶ್ವವನೆ ಕಿರಿದುಗೊಳಿಸಿದರೂ
ಒಳಗೊಳಗೇ ಪರಕೀಯರಾಗಿ ಉಳಿದವರು
ಜಗದ ಕಟುಸತ್ಯ ಮುಚ್ಚಿಟ್ಟು ನುಡಿಯುವವರು,
ಹಾಗೇ ಬರೆಯುವವರೂ ಹಾರಾ ತುರಾಯಿ ಹಾಕಿಸಿಕೊಂಡು
ಬಹುಪರಾಕ್ ಗಳಿಸುವಂಥ ಬಹುಮಂದಿ ಇರುವರು
ಅವರಿಗೇ ಹಾಡಿ ಹೊಗಳುವವರಿಗೆ ಕಾಲವಿದಲ್ಲ...

ಅಪ್ರಿಯವಾದರೂ ಸತ್ಯವನ್ನು ಪ್ರಿಯವಾಗಿ ಹೇಳುವವರಿಗೆ
ಇದು ಕಾಲವಲ್ಲವೆಂದು ಅವರನ್ನು ದೂರ ಇಡುವರಲ್ಲ;
ಪ್ರತಿಭೆ ಎಂಬುದು ಎಂದಿಗೂ ಬೂದಿ ಮುಚ್ಚಿದ ಕೆಂಡ
ಅದು ಎಂದಿದ್ದರೂ ಪ್ರಜ್ವಲಿಸುವುದೂ ಸಿಡಿಯುವುದೇ
ಅದ ಕೆದಕಬಾರದೆಂಬುದ ಹೊಳೆಯುವುದೇ ಇಲ್ಲ...!

ಗತಕಾಲದ ಚರ್ವಿತ ಚವರ್ಣ ಬೋಧನೆಗಳು
ದಿನೇದಿನೇ ವೇಗಗತಿಯ ವೈಜ್ಞಾನಿಕ ಪ್ರಗತಿಯಲಿ
ಸಾಗಿಹ ಪ್ರಪಂಚಕ್ಕೆ ಸಪ್ಪೆಯಾಗಿರೆ ರುಚಿಸುವುದೆಂತು...?
ಹೊಸ ಮೌಲ್ಯಗಳ ಹುಟ್ಟು ಹಾಕುವವರ ಪರಿಶ್ರಮಕ್ಕೆ,
ಎನಿತೋ ದೈವಿಕತೆಯಲಿ ಹೊಸ ತತ್ವಗಳ ವಿಚಾರಗಳಿಗೆ
ಇಂಬುಗೊಡುವವರಿಗೆ,  ಅದೇನೆಂದು ತಿಳಿಯಬಯಸದೇ
ಗುರುತಿಸಲಾರದೇ ಹೋದವರೇ ಆಭಿಮಾನಶೂನ್ಯರಲ್ಲವೇ....
ಈ ಪ್ರಪಂಚದಲಿ ನಮ್ಮನಮ್ಮವರೊಳಗೇ....

ಹೌದು, ಹೊಸತೆಂಬುದನ್ನು ಈ ಜಗತ್ತು
ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳಲಾರದಲ್ಲ..!
ಪ್ರಪಂಚದಲ್ಲಿ ಎಲ್ಲರೂ ತಮ್ಮ ಪ್ರಚಾರಕ್ಕಾಗಿ,
ಹಣ ಹೆಸರು ಮಾಡಲಿಕ್ಕಾಗಿಯೆ ಇದ್ದಾರೆಂಬ
ಭ್ರಮೆಯೇ ದೊಡ್ಡ ಪಿಡುಗಾಗಿ ಪೀಡಿಸಿದೆಯಲ್ಲ...

ಯಾರು ಗುರುತಿಸದಿದ್ದರೇನು! ಸುಮ್ಮನಿರಲಾರದ
ಕವಿ ಜೀವವೋ ತನ್ನ ತುತ್ತೂರಿ ತಾನೇ ಊದಿಕೊಳ್ಳುವುದು
ಅಭಿಮಾನ ಶೂನ್ಯರೆನಿಸಿಕೊಂಡವರ ನಡುವೆಯೇ
ಅನುಭವದ ತೇಜಿಯಲಿ ಬದುಕು ಬರಹದಲಿ ಬದುಕುವುದು;
ಓದ ಬಯಸಿದವರಿಗೆ ಪರಾಮರ್ಶಿಸಿ ಸಮಾಲೋಚಿಸುವುದು
ಆತ್ಮ ಸಂತೋಷವನೆ ಕಾಣುವುದು; ಬಿಟ್ಟರೂ ಬಿಡದೇ
ಆ ಅನುಭಾವಗಳನು ಬಿಚ್ಚಿಟ್ಟು ಬಣ್ಣಿಸುವುದೂ
ಅಭಿಶಾಪವೇ ಅನಿವಾರ್ಯ ಕರ್ಮವೇ ಆಗಿದೆಯಲ್ಲ....