ಮ್ಲಾನವಾಗಿವೆ ಕನಸಿನ ಬಣ್ಣಗಳು
ಹೃದಯದ ಸರಸಿಯಲ್ಲೇ ಅರಳಿದ
ತಾವರೆಯ ಹೂಗಳು.
ನೀನಿಲ್ಲದ ದಿನಗಳಲಿ ಇರುಳು
ತಪ್ತವಾಗಿದೆ; ಪ್ರೀತಿಯ ಇನಿದನಿಗಳು
ಸೊಂಪಾಗಿ ಹನಿಯಾಗಿ ತೊಟ್ಟಿಕ್ಕಲಾಗದೇ
ಬತ್ತಿಹೋಗಿವೆ ಪಿಸು ಮಾತಿನ ಕುಸುಮಗಳು.
ಹ್ಞಾಂ! ಹಾಗೂ ಪಿಸುಗುಟ್ಟಿ ನುಡಿಯಲಾಗದೆ
ಹ್ಞುಂ, ಹೀಗೂ ಬಿಗುವಿಟ್ಟು ಸವಿ ಹೀರಲಾಗದೆ
ಒಣಗಿವೆ ಚೆಂದುಟಿಗಳು; ಹೊರಗಿನ ನೋವಿನಲ್ಲೂ
ಸುಖಿಸಿ ಇಹ ಮರೆಯಲೆಳೆಸುವ ಒಳಗಿನ ಅಂಗಗಳು
ತಟ್ಟನೆ ಕಾವೇರಿದರೂ ತಂಪಾಗದಿವೆ.
ಗೆಳೆಯಾ, ಅಂದಿಗೆ ಬೆದೆ ಬಂದ ಸೊಕ್ಕಿನಲಿ
ಹೆಡೆಯಾಡಿಸುತ್ತ ತಪ್ತವಾಗಿ ಹೋದ
ಕಾಮನೆಗಳೆಲ್ಲ ಇಂದಿನ ಅರಿವಿಗೆ ತಣ್ಣಗಾಗಿ
ಕರಗಿವೆ; ಬಿಸಿಯುಸಿರು ನಿಟ್ಟುಸಿರಾಗಿದೆ
ರಾಗ-ರತಿಯ ನವಿರಾದ ನರಳಿಕೆಗಳೆಲ್ಲವೂ
ಸತ್ತು ಪ್ರೇತವಾಗಿ ಸಂಚರಿಸುತ್ತವೆ.
****
No comments:
Post a Comment