ಸ್ವರಚಿತ ಕವನಗಳು

ಸ್ವರಚಿತ ಕವನಗಳು

Tuesday, July 24, 2007

ಕೆಲವು ಹನಿಗವನಗಳು

1.ಹಾಡುವುದನು
ಹಾಡುವುದನು
ಬಿಡಬೇಕೆಂದರೂ .
ಬಿಡಲಿಲ್ಲ ಹೃದಯ
ಹಾಡಿದರೆ ತಾನೆ
ನಲಿದೀತು ತೆರೆಸೀತು
ಜಗದ ಹೃದಯ.

2.ಮಾತು-ಮೌನ
ನನ್ನವಳ ಮಾತು
ಪಟಾಕಿ ಸಿಡಿದಂತೆ
ನನ್ನ ನಿತ್ಯ ಮೌನ
ನೀರು ಸುರಿದಂತೆ.

3.ನನ್ನವಳು
ಮುದ್ದು ಮಾಡುವಾಗ
ನನ್ನವಳು ಮದ್ದಾಗುತ್ತಾಳೆ
ಅವಳೊಂದಿಗೆ ವಾದಕ್ಕಿಳಿದಾಗ
ಅವಳೇ ಸಿಡಿ ಮದ್ದಾಗುತ್ತಾಳೆ ನನ್ನೆದೆಗೆ.

4.ಮೋಡಿ
ಚುಟುಕಾಗಿ ಹೇಳಿದರೆ
ಕೇಳುವವರೆ ಎಲ್ಲ –ಆದರೆ,
ಚುಟುಕು ಕಲೆಯ ಮೋಡಿ
ತಟ್ಟನೆ ಹೊಳೆಯುವುದಿಲ್ಲ
ಹೊಳೆದರಾಗಬೇಕು ನೋಡಿ
ಚುರುಕು ಮುಟ್ಟಿಸಿದಂತೇ body.

ಜೀವ-ಭಾವ

ಓ ನನ್ನ ಜೀವವೆ
ಏಕೆ ಸುಮ್ಮನೆ ಕೊರಗುವೆ
ಕಾಯುವುದು ನಿನ್ನ ಭಾವವೆ
ನಿನ್ನೊಳಗಿನ ಸತ್ವವೇ.

ಓ ನನ್ನ ಭಾವವೆ
ಏಕೆ ಬೇಧವ ಎಣಿಸುವೆ
ದಿಗ್ ದಿಗಂತದಾಚೆ ನಿನ್ನ ತಾಣವೆ
ಅಗೋಚರ ನಿನ್ನ ಲೋಕವೆ
ಚರಾಚರಗಳಲಿ ನಿನ್ನ ಪ್ರೇಮವೇ.

ಅನೂಹ್ಯ ಸೃಷ್ಟಿ ನೀನೆ ಅನಿತ್ಯ ದೃಷ್ಟಿ ಕಾಣುವೆ
ಆ ಭೋಗ ನೋವ ನಲಿವನೆಲ್ಲ ಇಲ್ಲೆ
ಅನುಭವಿಸುವೆ;ಬಿಡದೆ ಜಯಿಸುವೇ.

ನಿನಗೆ ನೀನ ದೈವವೆ
ಎದೆಯ ಗುಡಿಗೆ ದಿವ್ಯವೇ
ಎಲ್ಲ ಪೂಜೆ-ಭಕ್ತಿಗೆ-
ನೀನೆ ಧನ್ಯ ಜೀವಿಯೇ.

ಆದಿ ಅಂತ್ಯವಿಲ್ಲದೆ ಪೂರ್ಣವಾಗಿಹೆ
ನೀ ಅನಂತ ರೂಪವೇ
ನಿನ್ನೊಳಗೆ ನೀನು ಸತ್ಯವೇ;
ಅಪಕರ್ಮವಳಿವ ತತ್ವವೇ.

Tuesday, July 10, 2007

ಅದೇ ಸೂರ್ಯ; ಅದೇ ಬೆಳಗು!

ಮನವು ಕುಸಿದು ದೇಹ ಮುದುಡಿ
ಜೀವಕೆ ಲವಲವಿಕೆಯೆ ಇಲ್ಲವು
ಮಾತು ಮರೆತು ಮೌನ ಮುಸುಕಿ
ಪ್ರೀತಿ ಸ್ನೇಹಗಳೆಲ್ಲೋ ಹೂತು ಹೋದವು.

ಅದೇ ರಗಳೆ ಅದೇ ದೊಂಬಿ ಗಲಭೆಯು
ಉಗ್ರರಿಂದ ಮುಗ್ಧ ಜನರ ಹತ್ಯೆಯು
ಏಕೋ ಭೀತಿ ಅದೇಕೆ ವಾದ ಹೇಳಿ ಕೇಳಿ
ಪ್ರತ್ಯೇಕತೆ ದುರಭಿಮಾನ ಪ್ರತಿಷ್ಠೆಯು.

ಅಯ್ಯೊ ಬಂತೆ ಇದೆಂಥ ಕೆಟ್ಟ ಕಾಲ
ಒಂದುಗೂಡಿ ಬದುಕಲೇಕೆ ಕಷ್ಟವು
ಏನೆಲ್ಲ ನೀತಿ ನಿಯಮ ಕಟ್ಟಳೆಗಳೂ
ಮುರಿದು ಬೀಳೆ ಭರಿಸಲಾಗದೀ ನಷ್ಟವು.

ಪಶು-ಪಕ್ಷಿಗಳಿಗೂ ಒಳಸಮೀಕ್ಷೆ ಶಕ್ತಿಯು-
"ಇದೇ ಏನು ಮನುಜಕುಲ;ಇದೇನಿವರ ಆಟವು
ದಿನಬೆಳಗಾದರೆ ಇವರಲ್ಲೇಕೆ ಗೊಣಗಾಟವು",
ಇದೋ ನೋಡಿ ಪೇಟೆ ಬೀದಿಲಿ
ಜನಸಂದಣೆ ವಾಹನಗಳ ಮಧ್ಯೆಯು
ಹಸುವೊಂದು ಸ್ವಸ್ಥವಾಗಿಯೆ ಮಲಗಿದೆ
ತನ್ನದೇ ಸ್ವಾತಂತ್ರ್ಯವನು ಬಯಸಿದೆ
"ಈ ಮನುಜನಿಗೇಕೆ ತಲೆ ಕೆಟ್ಟಿದೆ"
ಎಂದು ತಾನೆ ಮೆಲ್ಲಗೆ ಮೆಲುಕು ಹಾಕಿ ಮೈಚಲ್ಲಿದೆ.

ಇದೇನು ಹೃದಯ ಇದೇನೊ ಭಾವ
ಇದ್ದಕ್ಕಿದ್ದೊಲೆ ಅನುರಣಿಸುವ ಬಂಧವು
ಅದೇ ಸೂರ್ಯ ಅದೇ ಬೆಳಗು!
ಮತ್ತದೇ ಹೊಂಬಿಸಿಲಿಗೆ ನಾಂದಿಯು!!.
-ಎಚ್.ಶಿವರಾಂ

Tuesday, July 03, 2007

ಕಾಂಬೆವು ದೇವರು

ದಿನವೂ ಬೆಳಕಿನತ್ತ
ಮುಖ ಮಾಡಿ
ಏಳುವವರು ನಾವು
ಇರುಳು ಸ್ವಸ್ಥರಾಗಿ
ನಿದ್ರಿಸಲು ಇಚ್ಛಿಸುವವರುನಾವು.

ಎಷ್ಟೋ ಸಲ ಇನ್ನೊಬ್ಬರ ಕಷ್ಟಕ್ಕೆ
”ಅಷ್ಟೇ ಎನ್ನುವವರು
ಅಷ್ಟೇ ಬಾರಿ ನಮ್ಮದೇ ಕಷ್ಟಕ್ಕೆ
”ಅಬ್ಬಾ ಎಂದುಸುರುವವರು
ನಿಡುಸುಯ್ಯುವವರು ನಾವು.

ದಿನವೂ ಭವಿಷ್ಯದತ್ತ
ನಿಟ್ಟಿಸಿ ಸುಖದ ಚಿಂತೆ ಮಾಡುವವರು
ಕ್ಷಣವೂ ವರ್ತಮಾನದಲಿ
ಯಾವ ನೋವೂ ಇರಲೊಲ್ಲದವರು.

ದಿನವೂ ಏನೇ ಆಗಲಿ-ಬಿಡಲಿ
ಹೊರಗಿನ ಗೋಳಿಗೆ
”ಅನಿಷ್ಟ” ಎನ್ನುವವರು
ಮನೆಯೊಳಗಿನ ದುಃಖಕೆ
”ಅಯ್ಯೋ” ಎಂದೊರಲುವವರು.

ದಿನವೂ ಆಸೆಗಳ ಹೊತ್ತು
ಹೊಸ ಬದುಕನರಸುತ್ತಲೆ
ಉತ್ಸುಕರಾಗುವೆವು;
ಸೋತಾಗಲೂ ನಗ ಬಲ್ಲವರು!
ಅರಿತಾಗಲೆ ನಾವು ಮನುಜರು
ಬೆರೆತು ಒಂದಾದಾಗಲೇ
ನಾವು ಕಾಂಬೆವು ದೇವರು.
-ಎಚ್.ಶಿವರಾಂ
ಮಂಗಳ ವಾರ ಪತ್ರಿಕೆ ಯಲ್ಲಿ ಪ್ರಕಟಿತ- ೦೨-೦೯-೧೯೯೨