ಸ್ವರಚಿತ ಕವನಗಳು

ಸ್ವರಚಿತ ಕವನಗಳು

Wednesday, January 02, 2019

ನಾನು ೧೯೯೬ ರ ಹಾಸನ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ಆಯ್ಕೆಯಾದದ್ದು...

ನಾನು ೧೯೯೬ ಹಾಸನ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಭಾಗವಹಿಸಿ ಕವನ ಓದಲು ಅವಕಾಶ ಸಿಕ್ಕಿತ್ತು. ಅದಕ್ಕೆ ಕಾರಣರಾದವರು ಚಿಕ್ಕನಾಯಕನಹಳ್ಳಿ ಸಾಹಿತಿಗಳಾದ ಆರ್ ಬಸವರಾಜ್ ಅವರು. ಅಂದೊಮ್ಮೊ ಚಿಕ್ಕನಾಯಕನಹಳ್ಳಿ ಗೆ ಮಿತ್ರರೊಂದಿಗೆ ಹೋದಾಗ ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಅದುವರೆಗೆ ಪತ್ರ ಮಿತ್ರರಾಗಿ ನನ್ನಕಥೆಗಳು, ಕಾದಂಬರಿಗಳು ಕವನಗಳನ್ನು ಮೆಚ್ಚಿ ಕೊಂಡಿದ್ದರು.  ಅಂದು ಅವರ ಭೇಟಿಯಾದಾಗ ನೀವೇಕೆ ಸಾಹಿತ್ಯ ಸಮ್ಮೇಳನಗಳಿಗೆ ಬರುತ್ತಿಲ್ಲ? ಅಂದರು. ಕವಿಗೋಷ್ಟಿಯಲ್ಲಿ ಕವಿತೆ ಓದುವ ಅವಕಾಶ ಸಿಕ್ಕಿಲ್ಲವೇಕೆ ?"
 ನಾನು ಮುಗುಳ್ನಕ್ಕೆ.
ಯಾಕೆ ನಗುತ್ತೀರಿ? ಕೇಳಿದರು.
"ಅಲ್ಲಿ  ಶಿಫಾರಸ್ಸೂ  ಹಣವೇ ..ಕವಿತೆ ಓದುತ್ತದೆ .
ಹಾಗೇನಿಲ್ಲ ಪ್ರತಿಭಾವಂತರಿಗೆ ಅದೆಲ್ಲ ಏನೂ.ಬೇಡ."
ನಾನು.ಮತ್ತೆ ನಸುನಗುತ್ತಾ,
"ನನ್ನದೊಂದೂ  ಕಾದಂಬರಿ,
"ಕಾಲೇಜ್ ಕಲಿಗಳು" ಆಗಷ್ಟೇ ಪ್ರೆಸ್ ನಿಂದ ಬಂದಿತ್ತು. ಅದನ್ನು ನಮ್ಮ ತಾಲ್ಲೂಕಿನ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರಿಗೆ ತೋರಿಸಿ ಇದನ್ನು ಸಮ್ಮೇಳನದಲ್ಲಿ  ಬಿಡುಗಡೆಗೆ ಅವಕಾಶ ಮಾಡಿ ಕೊಡಿ" ಎಂದು ಕೇಳಿದೆ..
"೫00 ರೂ. ಕೊಡಿ ಮಾಡಿಸುತ್ತೇನೆ" ಎಂದರು
ಅದು 1996 ರ ಸಮ್ಮೇಳನ. ಆಗ ೫00 ರೂ. ನನಗೆ ದೊಡ್ಡ ಮೊತ್ತವೇ.  ನಾನೋ  ಕೆ. ಆರ್. ಪುರಂನ ಒಂದು ವಠಾರದ  ಮನೆಯಲ್ಲಿದ್ದು ಮೂವರು ಮಕ್ಕಳು ಹೆಂಡತಿಯೊಂದಿಗೆ ಯಾರ ಸಹಾಯವೂ ಇಲ್ಲದೇ  ವಾಸಿಸುತ್ತ ಇದ್ದೆ.
"ನನ್ನಲ್ಲಿ ಅಷ್ಟು ಹಣವಿಲ್ಲ" ಎಂದೆ
ಮತೇನು ಮಾಡತ್ತೀರಿ? ಅಂದರು.
ಈ ಪುಸ್ತಕ ಪ್ರಕಾಶಕರಿಂದ ನಿಮಗೆ ಹಣ ಬಂದಿಲ್ಲವೇ ?"
"ಇಲ್ಲ, ನಾನೇ ಆಫೀಸ್ ನಲ್ಲಿ ಹಾಕಿದ ೩000 ರೂ  ಚೀಟಿ ತಗೆದು ಅವರಿಗೆ ಕೊಟ್ಟಿದ್ದೇನೆ. ಅವರು ೩00 ಪ್ರತಿಗಳನ್ನ ಷ್ಟೇ ನನಗೆ ಕೊಟ್ಟಿದ್ದಾರೆ. ಪರವಾಯಿಲ್ಲಬಿಡಿ ಮನೆಯಲ್ಲೇ ದೇವರ ಮುಂದೆ ಪುಸ್ತಕ ಇಟ್ಟು ಪೂಜೆ ಮಾಡಿ ಸ್ವೇಹಿತರಿಗೆ ಹಂಚುವೆ " ಅಂದೆ.
"ಹಾಗೇ ಮಾಡಿ" ಅಂದರು ನಮ್ಮ ತಾಲ್ಲೂಕಿನ ಅಧ್ಯಕ್ಷರವರು ಮರುಕದಿಂದ ನೋಡಿ ನಕ್ಕು ಹೇಳಿದರು.
ಆನಂತರದ ಸಂದರ್ಭದಲ್ಲಿ, ಸಾಹಿತಿ
ಆರ್ ಬಸವಾರಾಜರು ಈ ಬಾರಿ ಹಾಸನ ಸಾಹಿತ್ಯ ಸಮ್ಮೇಳನದಲ್ಲಿ  ನೀವು ಕವಿತೆ ಓದುವಿರಿ.
 ಪರಿಷತ್ತಿನಿಂದ ಪತ್ರ ನಿಮ್ಮಮನೆಗೇ ಅಂಚೆಯಲ್ಲಿ ಬರುತ್ತದೆ. ಎಂದು ಹೇಳಿದ್ದರು.
ನಾನು ನಕ್ಕೆ, ಅವರಿಗೆ ಕೈ ಮುಗಿದು ಹೊರಟು ಬಂದೆ. ಅವರು ಹೇಳಿದಂತೆಯೇ ಹಾಸನದ ೧೯೯೬ ರ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಗೋಷ್ಟಿಯಲ್ಲಿ ಭಾಗವಹಿಸಲು ನನಗೆ ಅಂಚೆಯಲ್ಲಿ ಹದಿನೈದು ದಿನಗಳ ಮುಂಚೆಯೇ ಪತ್ರ ಬಂದಿತ್ತು.
ನನ್ನ ಶ್ರೀಮತಿ ಸಂಭ್ರಮಿಸಿದಳು. ಯಾಕಂದೆರೆ, ಹಾಸನ ನನ್ನ ಶ್ರೀಮತಿಯ ತವರೂರು.  ಇನ್ನೇನು ಅವಳೊಂದಿಗೆ  ಮಕ್ಕಳನ್ನೂ ಕರೆದು ಕೊಂಡು ಹಾಸನ ಸಮ್ಮೇಳನ ಕ್ಕೆ ಹೊರಡುವುದೆಂದಾಯಿತು. ಅವಳೋ  ಅವಳ ತಾಯಿಗೆ ಹಾಗೂ ಹಾಸನದ ಬಂಧು ಬಳಗಕ್ಕೆಲ್ಲ ವಿಷಯ ತಿಳಿಸಿ ಬಿಟ್ಟಳು.
ಸಮ್ಮೇಳನಕ್ಕೆ ಆಹ್ವಾನ ಪತ್ರಿಕೆ ಅಂಚೆಯಲ್ಲಿ ನಾಲ್ಕು ದಿನ ಮುಂಚೆಯೇ ಬಂತು. ನನ್ನಾಕೆ ಸಂತಸದಿಂದ ಅದನ್ನು ಕೈಗೆತ್ತಿಕೊಂಡು ಪುಟಗಳನ್ನು ತಿರುವಿ ಓದಿದ್ದೇ ಓದಿದ್ದೂ ಎರಡೂ ಕವಿಗೋಷ್ಟಿಗಳಲ್ಲೂ ನನ್ನ ಹೆಸರು ಇಲ್ಲವಾಗಿತ್ತು!
"ಇದೇನ್ರಿ ಹೀಗಾ ಮೋಸ ಮಾಡೋದೂ...? ಯಾರದ್ದೋ ವಶೀಲಿ ಕಣ್ರೀ.  ಅವರ ಹೆಸರು ಹಾಕಿ  ನಿಮ್ಮ ಹೆಸರು ಕೈ ಬಿಟ್ಟಿದ್ದಾರೆ" ಅಂದಳು.
ನಾನು ಶುಷ್ಕ ನಗೆ ನಕ್ಕೆ.
ಆನಂತರ ಒಮ್ಮೆ ಹಾಸನಕ್ಕೆ ಹೋದಾಗ ನನ್ನ ಅತ್ತೆಯವರು, "ನೀವ್ ಕವಿತೆ ಓದ್ತಿರಾಂತ ಬೆಳಗಿಂದಾ ಅಲ್ಲೇ ಪೆಂಡಾಲ್ ನಾಗೆ ಹೋಗಿ ಕುಳಿತಿದ್ದೆ.  ನೀವ್ಯಾಕೆ ಬರಲೇ ಇಲ್ಲಾ...?" ಅಂದರು. ನಾನು ಮತ್ತೆ ಶುಷ್ಕ ನಗೆನಕ್ಕೆ. ನನ್ನ ಹೆಂಡತಿ ನಡೆದ ಮೋಸದ ವಿಷಯ ತಿಳಿಸಿದಳು.
ಆನಂತರದ ಪತ್ರ ಒಂದರಲ್ಲಿ,
ಸಾಹಿತಿ ಬಸವರಾಜ್ ಅವರು ಏಕೆ ಹಾಸನ ಸಮ್ಮೇಳನಕ್ಕೆ ಬರಲಿಲವೆಂದು ಬರೆದು ಕೇಳಿದರು, ನಾನು ನಡೆದ ವಿಷಯ ತಿಳಿಸಿದೆ. "ನೀವು ಬಂದಿದ್ದರೆ ನಾನು ಕವಿತೆ ಓದಲು ಅವಕಾಶ ಕೊಡಿಸುತ್ತಿದ್ದೆ" ಎಂದರು.
ಅದಕ್ಕೆ ನನಗೆ  ಕವಿ ಮಾನ್ಯತೆಯೂ ಸಂಭಾವನೆಯೂ  ಬರುತ್ತಿತ್ತೇ....? ಎಂದು ಕೇಳಲಾದೀತೇ....
ಅವರಿಗೆ ಅದೇ ೧೯೯೬ ರ ಹಾಸನ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿದ್ದರು.

Wednesday, September 20, 2017

ಅಹಂಕಾರವಿಲ್ಲ ಎನ್ನುವುದೂ
ಅಹಂಕೃತಿಯ ಲಕ್ಷಣವೆ
ಅಹಂಕಾರವಿಲ್ಲದ ಮನುಷ್ಯನಿಗೆ
ತನಗೇನೂ ತಿಳಿದಿಲ್ಲವೆಂಬ
ವಿನೀತ ಭಾವವಿರುತ್ತದೆ
ಅಂತಃ ಸತ್ವವನ್ನರಿಯಲು
ಧರ್ಮಗ್ರಂಥಗಳನ್ನು ಓದಿದಷ್ಟೂ
ಓದಬೇಕೆನಿಸುತ್ತದೆ
ಉತ್ತಮ ಪುಸ್ತಕಗಳನ್ನು ಓದಿದಷ್ಟೂ
ಪ್ರಪಂಚಜ್ಞಾನ ವಿಸ್ತ್ರತವಾಗುತ್ತದೆ
ಪೂರ್ವಾ ಪರ ವಿಮರ್ಶೆ ಬೆಳೆಯುತ್ತದೆ
ಮನುಷ್ಯ ಮನೋಬುದ್ಧಿಗಳಾಚೆ
ಪರಾತ್ಪರ ತತ್ವವೊಂದಿದೆ ಎಂಬ
ಅತೀವ ವ್ಯಾಕುಲ ಭಾವದಲ್ಲಿ
ದೇವ ಮಂದಿರವನ್ನು ಪ್ರವೇಶಿಸಿದರೆ
ಪರಮಾತ್ಮನ ದರ್ಶನದಲ್ಲಿ ಮೋಕ್ಷದ ಪರಮಾರ್ಥ ಅವನ ಅರಿವಿಗೆ ಬರುತ್ತದೆ
ಕೊನೆಯುಸಿರಿನಲ್ಲಿ ಜವನ್ಮುಕ್ತಿ
ದೊರೆಯುತ್ತದೆ.
-ತ್ರಿಗುಣಾತ್ಮಕ ಪ್ರಪಂಚ.
೨೦-೦9-೨೦೧೭

Thursday, October 23, 2014

ನೀనిಲ್ಲದ ದಿನಗಳಲಿ

ಮೌನವಾಗಿವೆ ಭಾವಗಳು
ಮ್ಲಾನವಾಗಿವೆ ಕನಸಿನ ಬಣ್ಣಗಳು
ಹೃದಯದ  ಸರಸಿಯಲ್ಲೇ ಅರಳಿದ
ತಾವರೆಯ ಹೂಗಳು.

ನೀನಿಲ್ಲದ ದಿನಗಳಲಿ ಇರುಳು
ತಪ್ತವಾಗಿದೆ; ಪ್ರೀತಿಯ ಇನಿದನಿಗಳು
ಸೊಂಪಾಗಿ ಹನಿಯಾಗಿ ತೊಟ್ಟಿಕ್ಕಲಾಗದೇ
ಬತ್ತಿಹೋಗಿವೆ ಪಿಸು ಮಾತಿನ ಕುಸುಮಗಳು.

ಹ್ಞಾಂ! ಹಾಗೂ ಪಿಸುಗುಟ್ಟಿ ನುಡಿಯಲಾಗದೆ
ಹ್ಞುಂ, ಹೀಗೂ ಬಿಗುವಿಟ್ಟು ಸವಿ ಹೀರಲಾಗದೆ
ಒಣಗಿವೆ ಚೆಂದುಟಿಗಳು; ಹೊರಗಿನ ನೋವಿನಲ್ಲೂ
ಸುಖಿಸಿ ಇಹ ಮರೆಯಲೆಳೆಸುವ ಒಳಗಿನ ಅಂಗಗಳು
ತಟ್ಟನೆ ಕಾವೇರಿದರೂ ತಂಪಾಗದಿವೆ.

ಗೆಳೆಯಾ, ಅಂದಿಗೆ ಬೆದೆ ಬಂದ ಸೊಕ್ಕಿನಲಿ
ಹೆಡೆಯಾಡಿಸುತ್ತ ತಪ್ತವಾಗಿ ಹೋದ
ಕಾಮನೆಗಳೆಲ್ಲ ಇಂದಿನ ಅರಿವಿಗೆ ತಣ್ಣಗಾಗಿ
ಕರಗಿವೆ; ಬಿಸಿಯುಸಿರು ನಿಟ್ಟುಸಿರಾಗಿದೆ
ರಾಗ-ರತಿಯ ನವಿರಾದ ನರಳಿಕೆಗಳೆಲ್ಲವೂ
ಸತ್ತು ಪ್ರೇತವಾಗಿ ಸಂಚರಿಸುತ್ತವೆ.    

****